
Mangalore:ಹಿಂದುಗಳ ಶೃದ್ದಕೇಂದ್ರದ ಗುರುಗಳ ಮೇಲೆ ನಡೆದಿರುವ ದಾಳಿ ಅತ್ಯಂತ ಗಂಭೀರ ವಿಚಾರ:ಕ್ಯಾ. ಬ್ರಿಜೇಶ್ ಚೌಟ
Tuesday, November 5, 2024
ಕಾಸರಗೋಡು ಎಡನೀರು ಶ್ರೀಗಳ ಮೇಲಿನ ಹಲ್ಲೆ ಯತ್ನವನ್ನು ತೀವ್ರವಾಗಿ ಖಂಡಿಸಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಗಳು ಸಂಚರಿಸುತ್ತಿದ್ದ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡ್ಡಗಟ್ಟಿ ಹಾನಿಗೊಳಿಸಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಸದರು, "400 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಎಡನೀರು ಸಂಸ್ಥಾನದ ಪೀಠಾಧಿಪತಿಯಾಗಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಕೇರಳ ಸರ್ಕಾರವು ಕೂಡಲೇ ಬಂಧಿಸಿ ಇಂಥಹ ವಿಕೃತಿ ಮನಸ್ಥಿತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು. ಶಾಂತಿ-ಸಾಮರಸ್ಯದ ಮೂಲಕ ಹಿಂದೂ ಸಮಾಜದ ಪರ ಕೆಲಸ ಮಾಡುತ್ತಿರುವ ಸ್ವಾಮೀಜಿ ಮೇಲೆಯೇ ಕಿಡಿಗೇಡಿಗಳು ನಡುರಸ್ತೆಯಲ್ಲೇ ಈ ರೀತಿ ಕಾನೂನು ಕೈಗೆತ್ತಿಕೊಂಡು ಹಲ್ಲೆಗೆ ಮುಂದಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಕಾಸರಗೋಡಿನ ಬೋವಿಕ್ಕಾನ–ಇರಿಯಣ್ಣಿ ಮಾರ್ಗ ಮಧ್ಯೆ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಫಾಲೋ ಮಾಡಿಕೊಂಡು ಬಂದು ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿರುವುದು ಅಕ್ಷಮ್ಯ. ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಹಾಗೂ ಹಿಂದೂ ಸಮಾಜದ ಆಧರಣೀಯರು, ಮಾರ್ಗದರ್ಶಕರಾಗಿರುವ, ಆಧ್ಯಾತ್ಮಿಕ ಗುರು ಎಡನೀರು ಸಂಸ್ಥಾನದ ಶ್ರೀಗಳ ಮೇಲೆ ನಡೆದಿರುವ ಈ ದಾಳಿಯು ಹಿಂದೂ ಸಮುದಾಯದವರ ಮೇಲೆ ನಡೆಸಿರುವ ದಾಳಿಯಾಗಿದೆ. ಇಂಥಹ ಜಿಹಾದಿ ಮನಸ್ಥಿತಿಯ ಘಟನೆಗಳನ್ನು ಇಡೀ ಹಿಂದೂ ಸಮಾಜವು ಒಟ್ಟಾಗಿ ಖಂಡಿಸಬೇಕು ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟರು.
ಹೀಗಿರುವಾಗ, ಕೇರಳ ಸರ್ಕಾರವು ಸ್ವಾಮೀಜಿ ಮೇಲಿನ ಹಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಸರ್ಕಾರದ ಕಡೆಯಿಂದ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಂಸದರು ಒತ್ತಾಯಿಸಿದ್ದಾರೆ.